Current AffairsSpardha Times

ಭಾರತಕ್ಕೆ ರಾಜತಾಂತ್ರಿಕ ಗೆಲುವು, ಕತಾರ್‌ನಲ್ಲಿ ಮರಣದಂಡನೆ ಗುರಿಯಾಗಿದ್ದ 8 ನೌಕಾಪಡೆ ಅಧಿಕಾರಿಗಳ ಬಿಡುಗಡೆ

Share With Friends

ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ 8 ಮಾಜಿ ಯೋಧರನ್ನು ದೋಹಾ (ಸೋಮವಾರ) ಬಿಡುಗಡೆ ಮಾಡಿದೆ. ಅವರಲ್ಲಿ ಏಳು ಮಂದಿ ಮಧ್ಯಪ್ರಾಚ್ಯ ದೇಶದಲ್ಲಿ 18 ತಿಂಗಳ ಜೈಲು ವಾಸದ ನಂತರ ಈಗಾಗಲೇ ಭಾರತಕ್ಕೆ ಮರಳಿದ್ದಾರೆ. ಕೇಂದ್ರ ಸರ್ಕಾರದ ರಾಜತಾಂತ್ರಿಕ ಹಸ್ತಕ್ಷೇಪದ ನಂತರ ಮರಣದಂಡನೆಯನ್ನು ವಿಸ್ತೃತ ಜೈಲು ಶಿಕ್ಷೆಗೆ ಬದಲಾಯಿಸಲಾಗಿದೆ.

ಕತಾರ್‌ನಲ್ಲಿ ಇಸ್ರೇಲ್ ಪರ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಬಂಧಿತರಾಗಿ ಮರಣದಂಡನೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ ಎಲ್ಲಾ 8 ಮಂದಿ ಹಿರಿಯ ಅಧಿಕಾರಿಗಳ ಪೈಕಿ ಏಳು ಮಂದಿ ಈಗಾಗಲೇ ಸ್ವದೇಶಕ್ಕೆ ಮರಳಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ಭಾರತಕ್ಕೆ ಬಹು ದೊಡ್ಡ ರಾಜತಾಂತ್ರಿಕ ಗೆಲುವುಗಳಲ್ಲಿ ಒಂದು ಎಂದು ಹೇಳಲಾಗಿದೆ.

ನವದೆಹಲಿಯ ರಾಜತಾಂತ್ರಿಕ ಹಸ್ತಕ್ಷೇಪದ ನಂತರ ಮರಣದಂಡನೆಯನ್ನು ವಿಸ್ತೃತ ಜೈಲು ಶಿಕ್ಷೆಗೆ ಬದಲಾಯಿಸಲಾಗಿತ್ತು. ನೌಕಾಪಡೆಯ ಯೋಧರು ತಮ್ಮ ತಾಯ್ನಾಡಿಗೆ ಮರಳಲು ಸಹಾಯ ಮಾಡಿ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದರು. ಅದರಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಎಲ್ಲಾ ರಾಜತಾಂತ್ರಿಕ ಚಾನೆಲ್‌ಗಳನ್ನು ಸಜ್ಜುಗೊಳಿಸುವುದಾಗಿ ಭರವಸೆ ನೀಡಿದೆ. ಅಷ್ಟೇ ಅಲ್ಲದೇ ಅವರೆಲ್ಲರನ್ನು ಮರಳಿ ಭಾರತಕ್ಕೆ ಕರೆತರಲು ಕಾನೂಣು ನೆರವು ವ್ಯವಸ್ಥೆ ಮಾಡವುದಾಗು ಭರವಸೆ ನೀಡಿತ್ತು.

ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾ ಸೌರಬ್ ವಸಿಷ್ಠ್, ಕಮಾಂಡರ್ ಪೂರ್ಣೇಂದು ತಿವಾರಿ, ಕ್ಯಾ ಬೀರೇಂದ್ರ ಕುಮಾರ್ ವರ್ಮಾ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಸಂಜೀವ್ ಗುಪ್ತಾ , ಕಮಾಂಡರ್ ಅಮಿತ್ ನಾಗಪಾಲ್ ಮತ್ತು ನಾವಿಕ ರಾಗೇಶ್ ಅವರನ್ನು ಕತಾರ್‌ನಲ್ಲಿ 2022ರ ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು. ನೌಕಾ ಪಡೆಯಿಂದ ನಿವೃತ್ತರಾದ ಬಳಿಕ ಅವರು ಕತಾರ್‌ನ ದಹ್ರಾ ಗ್ಲೋಬಲ್ ಎಂಬ ಖಾಸತಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಕತಾರಿ ಎಮಿರಿ ನೌಕಾ ಪಡೆಗೆ ಇಟಾಲಿಯನ್ ಯು212 ಸಬ್‌ಮೆರಿನ್‌ಗಳನ್ನು ಪೂರೈಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿತ್ತು. ಆದರೆ ಭಾರತ ಮೂಲದ ಈ ಎಂಟು ಮಂದಿಯನ್ನು ದಿಢೀರನೆ ಬಂಧಿಸಲಾಗಿತ್ತು.

2023ರ ಅಕ್ಟೋಬರ್‌ನಲ್ಲಿ ಕತಾರ್ ನ್ಯಾಯಾಲಯವು ಎಲ್ಲಾ ಎಂಟು ಮಂದಿಗೆ ಮರಣದಂಡನೆ ವಿಧಿಸಿತ್ತು. ಇದು ಭಾರತಕ್ಕೆ ತೀವ್ರ ಆಘಾತ ಮೂಡಿಸಿತ್ತು. ಅವರ ಬಂಧನ ಹಾಗೂ ಶಿಕ್ಷೆಗೆ ನಿಖರ ಕಾರಣವನ್ನು ಅಲ್ಲಿನ ಸರ್ಕಾರ ಬಹಿರಂಗಪಡಿಸಿರಲಿಲ್ಲ. ಭಾರತ ಸರ್ಕಾರ ಕೂಡ ಈ ಆರೋಪಗಳನ್ನು ಬಹಿರಂಗಪಡಿಸಿಲ್ಲ. ಆದರೆ ಸಬ್‌ಮೆರಿನ್ ಕುರಿತು ಇಸ್ರೇಲ್‌ಗೆ ಮಾಹಿತಿ ನೀಡುವ ಗೂಢಚಾರಿಕೆಯಲ್ಲಿ ಭಾಗಿಯಾಗಿರುವ ಆರೋಪ ಹೊರಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಕೂಡಲೇ ಮಧ್ಯಪ್ರವೇಶ ಮಾಡಿದ್ದ ಭಾರತ ಸರ್ಕಾರ, ಅವರನ್ನು ಕಾಪಾಡಲು ಎಲ್ಲಾ ಕಾನೂನು ಆಯ್ಕೆಗಳನ್ನು ಪರಿಶೀಲಿಸುವುದಾಗಿ ತಿಳಿಸಿತ್ತು. ಭಾರತದ ರಾಜತಾಂತ್ರಿಕ ಹಸ್ತಕ್ಷೇಪದ ಬಳಿಕ ಕತಾರ್ ನ್ಯಾಯಾಲಯವು ಕಳೆದ ಡಿಸೆಂಬರ್‌ನಲ್ಲಿ ಮರಣದಂಡನೆಯಿಂದ ಶಿಕ್ಷೆ ಪ್ರಮಾಣವನ್ನು ತಗ್ಗಿಸಿತ್ತು.

ಕೇಂದ್ರ ಸರ್ಕಾರದಿಂದ ಅಧಿಕೃತ ಹೇಳಿಕೆ ಬಿಡುಗಡೆ:
ನೌಕಾಪಡೆಯ ನಿವೃತ್ತ ಅಧಿಕಾರಿಗಳನ್ನು ಮುಕ್ತಗೊಳಿಸುವ ನಿರ್ಧಾರವನ್ನು ಸ್ವಾಗತಿಸುವ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ, “ಕತಾರ್‌ನಲ್ಲಿ ಬಂಧಿತರಾಗಿರುವ ದಹ್ರಾ ಗ್ಲೋಬಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಟು ಭಾರತೀಯ ಪ್ರಜೆಗಳ ಬಿಡುಗಡೆಯನ್ನು ಭಾರತ ಸರ್ಕಾರ ಸ್ವಾಗತಿಸುತ್ತದೆ. ಅವರಲ್ಲಿ ಎಂಟು ಮಂದಿಯಲ್ಲಿ ಏಳು ಮಂದಿ ಭಾರತಕ್ಕೆ ಮರಳಿದ್ದಾರೆ. ಈ ಪ್ರಜೆಗಳ ಬಿಡುಗಡೆ ಮತ್ತು ಮನೆಗೆ ಬರಲು ಅನುವು ಮಾಡಿಕೊಡಲು ಕತಾರ್ ರಾಜ್ಯದ ಅಮೀರ್ ಅವರ ನಿರ್ಧಾರವನ್ನು ನಾವು ಪ್ರಶಂಸಿಸುತ್ತೇವೆ” ಎಂದು ತಿಳಿಸಿದೆ.

ಜಲಾಂತರ್ಗಾಮಿ ಕಾರ್ಯಕ್ರಮದ ಮೇಲೆ ಬೇಹುಗಾರಿಕೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಎಂಟು ಭಾರತೀಯ ಪ್ರಜೆಗಳು ಅಕ್ಟೋಬರ್ 2022 ರಿಂದ ಕತಾರ್‌ ಜೈಲಿನಲ್ಲಿದ್ದರು. ನೌಕಾಪಡೆಯ ನಿವೃತ್ತ ಸಿಬ್ಬಂದಿಗೆ ಕತಾರ್ ನ್ಯಾಯಾಲಯವು ಮರಣದಂಡನೆ ವಿಧಿಸಿತ್ತು. ಅದನ್ನು ಇನ್ನೂ ಅಧಿಕೃತವಾಗಿ ಬಹಿರಂಗ ಪಡಿಸಿರಲಿಲ್ಲ. ಇದಕ್ಕೂ ಮೊದಲು, ಕತಾರ್ ನ್ಯಾಯಾಲಯವು ದಹ್ರಾ ಗ್ಲೋಬಲ್ ಪ್ರಕರಣದಲ್ಲಿ ಕಳೆದ ವರ್ಷ ಬಂಧಿಸಲ್ಪಟ್ಟಿದ್ದ ಎಂಟು ಮಾಜಿ ಭಾರತೀಯ ನೌಕಾ ಅಧಿಕಾರಿಗಳ ಮರಣದಂಡನೆ ಶಿಕ್ಷೆಯನ್ನು ಕಡಿಮೆ ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿತ್ತು. ”ಈಗ ಮರಣದಂಡನೆ ಶಿಕ್ಷೆಯನ್ನು ಜೈಲು ಶಿಕ್ಷೆಗೆ ಇಳಿಸಲಾಗಿದೆ. ತೀರ್ಪನ್ನು ವಿವರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, “ದಹ್ರಾ ಗ್ಲೋಬಲ್ ಪ್ರಕರಣದಲ್ಲಿ ಕತಾರ್‌ನ ಮೇಲ್ಮನವಿ ನ್ಯಾಯಾಲಯದ ತೀರ್ಪನ್ನು ನಾವು ಇಂದು ಗಮನಿಸಿದ್ದೇವೆ. ಇದರಲ್ಲಿ ಶಿಕ್ಷೆಯನ್ನು ಕಡಿಮೆ ಮಾಡಲಾಗಿದೆ. ಕತಾರ್‌ನಲ್ಲಿರುವ ಕಾನೂನು ತಂಡದೊಂದಿಗೆ ನಿಕಟ ಸಂಪರ್ಕದಲ್ಲಿದೆ” ಎಂದು ಹೇಳಿದೆ.

“ವಿವರವಾದ ತೀರ್ಪಿಗೆ ಕಾಯಲಾಗುತ್ತಿದೆ. ಮುಂದಿನ ಕ್ರಮಗಳನ್ನು ನಿರ್ಧರಿಸಲು ನಾವು ಕಾನೂನು ತಂಡ ಮತ್ತು ಕುಟುಂಬ ಸದಸ್ಯರೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ. ಕತಾರ್‌ನಲ್ಲಿರುವ ನಮ್ಮ ರಾಯಭಾರಿ ಮತ್ತು ಇತರ ಅಧಿಕಾರಿಗಳು ಉನ್ನತ ನ್ಯಾಯಾಲಯದಲ್ಲಿ ಹಾಜರಾಗಿದ್ದರು. ನಾವು ಕಾನೂನು ಸಹಾಯವನ್ನು ನೀಡುವುದನ್ನು ಮುಂದುವರಿಸುತ್ತೇವೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಈ ಎಂಟು ಭಾರತೀಯರು ಯಾರು?
ಕತಾರ್ ನ್ಯಾಯಾಲಯವು ಶಿಕ್ಷೆ ವಿಧಿಸಿದ ಎಂಟು ಜನರು ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿಗಳು.
1.ಕಮಾಂಡರ್ ಪೂರ್ಣೇಂದು ತಿವಾರಿ
2.ಕಮಾಂಡರ್ ಸುಗುಣಾಕರ್ ಪಾಕಳ
3.ಕಮಾಂಡರ್ ಅಮಿತ್ ನಾಗ್ಪಾಲ್
4.ಕಮಾಂಡರ್ ಸಂಜೀವ್ ಗುಪ್ತಾ
5.ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್
6.ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ
7.ಕ್ಯಾಪ್ಟನ್ ಸೌರಭ್ ವಶಿಷ್ಠ
8.ನಾವಿಕ ರಾಗೇಶ್ ಗೋಪಕುಮಾರ್

ಎಲ್ಲಾ ಮಾಜಿ ಅಧಿಕಾರಿಗಳು ಭಾರತೀಯ ನೌಕಾಪಡೆಗೆ 20 ವರ್ಷಗಳ ವಿಶಿಷ್ಟ ಸೇವೆಯನ್ನು ನೀಡಿದ್ದಾರೆ. ಈ ಜನರು ತರಬೇತುದಾರರು ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು. 2019 ರಲ್ಲಿ, ಕಮಾಂಡರ್ ಪೂರ್ಣೇಂದು ತಿವಾರಿ ಅವರಿಗೆ ಸಾಗರೋತ್ತರ ಭಾರತೀಯರಿಗೆ ನೀಡುವ ಅತ್ಯುನ್ನತ ಗೌರವವಾದ ಪ್ರವಾಸಿ ಭಾರತೀಯ ಸಮ್ಮಾನ್ ನೀಡಲಾಯಿತು. ಎಲ್ಲಾ ಎಂಟು ಭಾರತೀಯರು ಖಾಸಗಿ ಕಂಪನಿ ದಹರಾ ಗ್ಲೋಬಲ್ ಟೆಕ್ನಾಲಜೀಸ್ ಮತ್ತು ಕನ್ಸಲ್ಟೆನ್ಸಿ ಸೇವೆಗಳಲ್ಲಿ ಕೆಲಸ ಮಾಡಿದ್ದಾರೆ. ಭಾರತೀಯ ನಾಗರಿಕರು ಕಳೆದ ಕೆಲವು ವರ್ಷಗಳಿಂದ ಕತಾರ್‌ನ ನೌಕಾಪಡೆಗೆ ತರಬೇತಿ ನೀಡುತ್ತಿದ್ದರು.

ನೀರಿನ ಬಗ್ಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಬಹುದಾದ ಸಂಭವನೀಯ ಪ್ರಶ್ನೆಗಳು

Leave a Reply

Your email address will not be published. Required fields are marked *

error: Content Copyright protected !!