GKKannadaSpardha Times

ಕನ್ನಡ ವ್ಯಾಕರಣ : ಛಂದಸ್ಸು ಮತ್ತು ಛಂದಸ್ಸಿನ ಕೃತಿಗಳು

Share With Friends

ಛಂದಸ್ಸು : ಕನ್ನಡ ಭಾಷೆಯ ಪದ್ಯಸಾಹಿತ್ಯದಲ್ಲಿ ಬಹಳ ಹಿಂದಿನಿಂದಲೂ ವಾಡಿಕೆಯಾಗಿ ಬಳಕೆಯಾಗುತ್ತ ಬಂದಿರುವ ಸಂಸ್ಕೃತ ಮತ್ತು ಪ್ರಾಕೃತ ಪ್ರಭಾವದ ಪದ್ಯಜಾತಿಗಳನ್ನೂ ವಿಶೇಷವಾಗಿ ಅಚ್ಚಕನ್ನಡ ಮಟ್ಟುಗಳೆನಿಸಿದ ತ್ರಿಪದಿ ಷಟ್ಪದಿ ಮೊದಲಾದ ಪದ್ಯಜಾತಿಗಳು ಮತ್ತು ಹೊಸಗನ್ನಡ ಕವಿತೆಯ ಮಟ್ಟುಗಳನ್ನೂ ಕನ್ನಡ ಛಂದಸ್ಸು ಎಂಬ ಮಾತು ಒಳಗೊಳ್ಳುತ್ತದೆ.

✦ ಕನ್ನಡ ಛಂದಸ್ಸನ್ನು ಕುರಿತ ಗ್ರಂಥಗಳು :

ಕಾವ್ಯಲಕ್ಷಣ ಗ್ರಂಥವಾದ ಕವಿರಾಜಮಾರ್ಗದಲ್ಲಿಯೇ (ಪ್ರ.ಶ.ಸು. 850) ಕನ್ನಡ ಛಂದಸ್ಸಿಗೆ ಸಂಬಂಧಿಸಿದ ವಿಷಯಗಳಾದ ಯತಿ, ಛಂದೋಭಂಗ, ಗುರುಲಘುದೋಷಗಳು, ಪ್ರಾಸ-ಇವುಗಳ ಪ್ರಸ್ತಾಪವಿದೆ. ಕನ್ನಡ ಕವಿಗಳು ಮುಖ್ಯವಾಗಿ ಸಂಸ್ಕೃತ ಛಂದಸ್ಸಿನಲ್ಲಿ ಸ್ವಾತಂತ್ರ್ಯವಹಿಸಿ ಮಾಡಿಕೊಂಡ ಮಾರ್ಪಾಡುಗಳು, ಅವುಗಳಿಂದಾದ ಪರಿಣಾಮಗಳು-ಇವುಗಳ ಸ್ವರೂಪ ಸ್ಪಲ್ಪಮಟ್ಟಿಗೆ ಆ ವಿಷಯಗಳಿಂದ ತಿಳಿಯುತ್ತದೆ. ತಮಿಳು ಭಾಷೆಯ ಯಾಪ್ಪರುಂಗಲಕ್ಕಾರಿಹೈ ಎಂಬ ಪ್ರಾಚೀನ ಛಂದೋಗ್ರಂಥದ ವ್ಯಾಖ್ಯಾನದಲ್ಲಿ ಗುಣಗಾಂಕಿಯಂ ಎಂಬ ಕನ್ನಡ ಛಂದೋಗ್ರಂಥದ ಉಲ್ಲೇಖವಿದೆ.

ಇದು ಈವರೆಗೆ ದೊರೆತಿಲ್ಲ. ಅಲ್ಲದೆ ಈ ಗ್ರಂಥದ ಅಸ್ತಿತ್ವ, ಕರ್ತೃತ್ವ, ಕಾಲ ಎಲ್ಲವೂ ತೀರ ಅನಿಶ್ಚಿತವೂ ವಿವಾದಾಸ್ಪದವೂ ಆಗಿವೆ. ಮೂರನೆಯ ವಿಜಯಾದಿತ್ಯನೆಂಬ ಪುರ್ವಚಾಳುಕ್ಯ ರಾಜನಿಗೆ ಅಂಕಿತ ಮಾಡಿರಬಹುದಾದ, ಸು, 9ನೆಯ ಶತಮಾನದ ಕೃತಿಯಿದು ಎಂಬುದಾಗಿ ಊಹಿಸಲಾಗಿದೆ. 1ನೆಯ ನಾಗವರ್ಮನ (ಪ್ರ.ಶ.ಸು. 990) ಛಂದೋಂಬುಧಿ ಉಪಲಬ್ಧವಾದ ಕನ್ನಡ ಛಂದೋಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದುದು; ಪ್ರಮಾಣಭೂತವೂ ಪ್ರಸಿದ್ಧವೂ ಆದುದು.

ಇದರಲ್ಲಿ ಕನ್ನಡ ಛಂದಸ್ಸಿಗೆ ಸಂಬಂಧಿಸಿದ ನಾನಾ ವಿಷಯಗಳು ಸ್ವತಂತ್ರವಾಗಿಯೂ ತಕ್ಕಮಟ್ಟಿಗೆ ವಿಸ್ತಾರವಾಗಿಯೂ ಪ್ರತಿಪಾದಿತವಾಗಿವೆ. ಈ ಗ್ರಂಥದಲ್ಲಿ ಆರು ಅಧಿಕಾರಿಗಳಿದ್ದು, ಅವುಗಳಲ್ಲಿ ಸಂಸ್ಕೃತ, ಪ್ರಾಕೃತ ಮತ್ತು ಕನ್ನಡ ಛಂದಸ್ಸುಗಳಲ್ಲಿ ಕನ್ನಡ ಕಾವ್ಯಾಭ್ಯಾಸಿಗಳು ತಿಳಿಯಬೇಕಾಗಿರುವ ಅತ್ಯಗತ್ಯವಾದ ಎಲ್ಲ ಅಂಶಗಳೂ ಸಂಗ್ರಹಿತವಾಗಿವೆ. ಐದನೆಯ ಅಧಿಕಾರ ಅಚ್ಚ ಕನ್ನಡ ಛಂದಸ್ಸಿಗೆ ಮೀಸಲಾಗಿದ್ದು, ಅದು ಆ ವಿಷಯದ ವಿವೇಚನೆಗೆ ಬಹು ಉಪಯುಕ್ತವಾದ ಮೂಲಭೂತವಾದ ಸಾಮಗ್ರಿಯನ್ನೊದಗಿಸುತ್ತದೆ.

ಪ್ರಸಿದ್ಧ ಶಾಸ್ತ್ರಜ್ಞನಾದ ಇಮ್ಮಡಿ ನಾಗವರ್ಮ (ಸು. 1145) ಛಂದೋವಿಚಿತಿ ಎಂಬೊಂದು ಗ್ರಂಥವನ್ನು ಅಥವಾ ಛಂದಶ್ಶಾಸ್ತ್ರವನ್ನು ಕುರಿತ ಗ್ರಂಥವೊಂದನ್ನು ಬರೆದಿದ್ದಂತೆ ಕಾವ್ಯಾವಲೋಕದಲ್ಲಿ ದೊರೆಯುವ ಒಂದು ಆಧಾರದಿಂದ ತಿಳಿಯುತ್ತದೆ. ಇದು ಈವರೆಗೆ ದೊರೆತಿಲ್ಲ. ಈಶ್ವರ ಕವಿಯ (ಪ್ರ.ಶ. ಸು. 1500) ಕವಿಜಿಹ್ವಾಬಂಧನಂ ಒಂದು ರೀತಿಯ ಸಮ್ಮಿಶ್ರ ಗ್ರಂಥವಾದರೂ ಮುಖ್ಯವಾಗಿ ಛಂದಶ್ಶಾಸ್ತ್ರವನ್ನು ಕುರಿತದ್ದು.

ಈ ಗ್ರಂಥದ ಮೊದಲ ಮೂರು ಆಶ್ವಾಸಗಳಲ್ಲಿ ಪ್ರಧಾನವಾಗಿ ಛಂದಶ್ಶಾಸ್ತ್ರದ ಸಂಜ್ಞಾಪ್ರಕರಣಕ್ಕೆ ಸಂಬಂಧಿಸಿದ ಕೆಲವು ವಿಷಯಗಳು ಮಾತ್ರ ಬಂದಿವೆ. ಅಲ್ಲಲ್ಲಿ ತೆಲುಗು ಛಂದೋಗ್ರಂಥಗಳ ಪ್ರತಿಪಾದನ ರೀತಿಯನ್ನೂ ವಿಷಯಗಳನ್ನೂ ಒಳಗೊಂಡಿರುವುದು ಈ ಕೃತಿಯ ವೈಶಿಷ್ಟ್ಯ. ಛಂದೋಂಬುಧಿಯ ತರುವಾಯದಲ್ಲಿ ತಕ್ಕಮಟ್ಟಿಗೆ ಗಣ್ಯವಾದ ಛಂದೋಗ್ರಂಥವೆಂದರೆ ಗುಣಚಂದ್ರನೆಂಬ ಜೈನಕವಿಯ (ಪ್ರ.ಶ. ಸು. 1650) ಛಂದಸ್ಸಾರ. ಇದರಲ್ಲಿ ಐದು ಆಧಿಕಾರಗಳಿದ್ದು, ಸಂಸ್ಕೃತ ಛಂದಸ್ಸಿನ ವಿಷಯಕ್ಕೆ ಪ್ರಮುಖವೆನಿಸಿದೆ.

ಮಾತ್ರಾಷಟ್ಪದಿಗಳು, ತಾಳಗಳು, ರಗಳೆಯ ಪ್ರಭೇದಗಳು ಈ ಮುಂತಾದವನ್ನು ಪ್ರಾಯಶಃ ಇಲ್ಲಿ ಮೊದಲ ಬಾರಿಗೆ ಪ್ರಸ್ತಾಪ ಮಾಡಿರುವುದು ಗಮನಾರ್ಹವಾಗಿದೆ. ಆದರೆ ಅಂಶವೃತ್ತಗಳ ವಿಚಾರವೇ ಇಲ್ಲದಿರುವುದು ಆಶ್ಚರ್ಯಕರವಾಗಿದೆ. ಶಾಲ್ಯದ ಕೃಷ್ಣರಾಜನ (ಪ್ರ.ಶ. 1748) ಷಟ್ಪ್ರತ್ಯಯವೆಂಬುದು ಪ್ರಸ್ತಾರ ಮೊದಲಾದ ಆರು ಪ್ರತ್ಯಯಗಳನ್ನು ವಿವರಿಸುವ ಛಂದೋಗ್ರಂಥ. ಕೇದಾರಭಟ್ಟನ ವೃತ್ತಿರತ್ನಾಕರದ ಅಜ್ಞಾತ ಕರ್ತೃಕವಾದ ಕನ್ನಡ ವೃತ್ತಿಯೊಂದು ಸು. ಇದೇ ಕಾಲಕ್ಕೆ (ಸು. 1775) ರಚಿತವಾದಂತೆ ತೋರುತ್ತದೆ. ಇವಕ್ಕೆ ಈಚಿನದಾದ ನಂದಿ ಛಂದಸ್ಸು (ಸು. 19ನೆಯ ಶ.) ಕರ್ತೃ ನಿಶ್ಚಿತವಾಗಿ ತಿಳಿಯದ, ಈಗ ವರ್ಣವೃತ್ತಗಳ ಭಾಗವಷ್ಟೇ ಉಳಿದಿರುವ ಒಂದು ಅಸಮಗ್ರ ಛಂದೋಗ್ರಂಥ.

ಕನ್ನಡ ಛಂದಸ್ಸಿನ ಗಣಸ್ವರೂಪವನ್ನು ಪ್ರಸಿದ್ಧವಾದ ಪದ್ಯಜಾತಿಗಳನ್ನೂ ಕೆಲವು ಸಂಸ್ಕೃತ ಲಕ್ಷಣ ಗ್ರಂಥಗಳಲ್ಲಿ ಕೂಡ ಪ್ರಾಸಂಗಿಕವಾಗಿ ವಿವೇಚಿಸಿರುವುದು ಕಂಡುಬರುತ್ತದೆ. ಜಯಕೀರ್ತಿಯ (ಸು. 1050) ಛಂದೋನುಶಾಸನಮ್ ಎಂಬ ಗ್ರಂಥದಲ್ಲಿ ಅಲ್ಲಲ್ಲಿ ಕನ್ನಡ ಛಂದಸ್ಸಿನ ಸಂಗತಿಗಳು ಕ್ವಚಿತ್ತಾಗಿ ಉಕ್ತವಾಗಿರುವುದಲ್ಲದೆ, ಕರ್ಣಾಟಕ ವಿಷಯಭಾಷಾಜಾತ್ಯಧಿಕಾರವೆಂಬ 6ನೆಯ ಅಧಿಕಾರದಲ್ಲಿ ಪುರ್ತಿಯಾಗಿ ಕನ್ನಡ ಛಂದಸ್ಸಿನ ವಿವೇಚನೆ ಲಕ್ಷಣ-ಲಕ್ಷ್ಯ ಸಮನ್ವಿತವಾಗಿ ಬಂದಿದೆ.

ಈ ಗ್ರಂಥದಲ್ಲಿ ನಾಗವರ್ಮನ ಛಂದೋಂಬುಧಿಯ ಪ್ರಭಾವವನ್ನು ಕಾಣಬಹುದಾಗಿದೆ. 3ನೆಯ ಸೋಮೇಶ್ವರನ ಮಾನಸೋಲ್ಲಾಸದಲ್ಲಿ (ಪ್ರ.ಶ. 1129), ಅದರ ಚತುರ್ವಿಂಶತಿಯ 16ನೆಯ ಅಧ್ಯಾಯದಲ್ಲಿ, ಕನ್ನಡ ಛಂದಸ್ಸಿಗೆ ಸಂಬಂಧಪಟ್ಟಂತೆ, ಅಂಶಗಣಗಳ ಸ್ವರೂಪವನ್ನೂ ತ್ರಿಪದಿ ಷಟ್ಪದಿ ಹಾಗೂ ಕಂದಪದ್ಯ ಇವುಗಳ ಸ್ವರೂಪವನ್ನೂ ಲಕ್ಷಣ-ಲಕ್ಷ್ಯಗಳೊಂದಿಗೆ ವಿವರಿಸಿದೆ.

ಶಾಙರ್ಗ್‌ದೇವನ ಸಂಗೀತರತ್ನಾಕರವೆಂಬ ಗ್ರಂಥದಲ್ಲಿ, ಅದರ 4ನೆಯ ಪ್ರಬಂಧಾಧ್ಯಾಯದಲ್ಲಿ, ಕನ್ನಡ ಛಂದಸ್ಸಿನ ಏಳೆ, ತ್ರಿಪದಿ ಮತ್ತು ಷಟ್ಪದಿಗಳ ಲಕ್ಷಣವನ್ನು ನಿರೂಪಿಸಿದೆ. ಕನ್ನಡ ಭಾಷಾಸಾಹಿತ್ಯಗಳ ಪರಿಚಯವಿದ್ದಂತೆ ತೋರುವ ಈ ಲಾಕ್ಷಣಿಕರ ವಿವರಣೆಗಳಿಂದ ಕನ್ನಡ ಛಂದಸ್ಸಿನ ಸ್ವರೂಪ ಜ್ಞಾನಕ್ಕೆ ತುಂಬ ಉಪಕಾರವಾಗಿದೆ.

ಪ್ರಾಸ : ಒಂದು ನಿರ್ದಿಷ್ಟ ವ್ಯಂಜನವು ಪದ್ಯದ ಪ್ರತಿ ಸಾಲಿನ ಆದಿ, ಮಧ್ಯ, ಅಥವಾ ಅಂತ್ಯದಲ್ಲಿ ನಿಯತವಾಗಿ ಬರುವುದೇ ಪ್ರಾಸ. ಕಾವ್ಯದ ಪ್ರತಿಸಾಲಿನ ಒಂದು ಮತ್ತು ಎರಡನೆಯ ಸ್ವರಗಳ ನಡುವೆ ಬರುವ ಪ್ರಾಸ ಆದಿ ಪ್ರಾಸ. ಪ್ರತಿಸಾಲಿನ ಮಧ್ಯದಲ್ಲಿ ಬರುವ ಪ್ರಾಸವು ಮಧ್ಯ ಪ್ರಾಸ. ಇದು ಸಾಮಾನ್ಯವಾಗಿ ಮೊದಲ ಸಾಲಿನಲ್ಲಿ, ಅದರಲ್ಲೂ ವಿಶೇಷವಾಗಿ ತ್ರಿಪದಿಗಳಲ್ಲಿ ಕಂಡುಬರುತ್ತದೆ. ಹಾಗೆಯೇ, ಪ್ರತಿಸಾಲಿನ ಅಂತ್ಯದಲ್ಲಿ ಬರುವ ಪ್ರಾಸವೇ ಅಂತ್ಯ ಪ್ರಾಸ.
✦ ಯತಿ : ಯತಿ ಎಂದರೆ ಕಾವ್ಯವನ್ನು ವಾಚಿಸುವಾಗ ಅರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣ.
✦ ಗಣ : ಗಣ ಎಂದರೆ ಗುಂಪು.ಕೆಲವು ನಿಯಮಗಳಿಗನುಸಾರವಾಗಿ ವಿಂಗಡಿಸಿದ ಅಕ್ಷರಗಳ ಗುಂಪು. ಈ ಗಣಗಳನ್ನು ಕಟ್ಟುವ ಘಟಕಗಳು ಎಂದರೆ ಹ್ರಸ್ವ ದೀರ್ಘಾಕ್ಷರಗಳು .ಇದರಲ್ಲಿ ‘ವರ್ಣಗಣ’ ಅಥವಾ’ಅಕ್ಷರಗಣ’,’ಮಾತ್ರಾಗಣ’ ಮತ್ತು ‘ಅಂಶಗಣ’ಗಳೆಂಬ ಮೂರು ವಿಧದ ಗಣಗಳಿವೆ.ಅಕ್ಷರಗಳನ್ನು ಆಧರಿಸಿ ಮಾಡಿದ ಗುಂಪು ವರ್ಣಗಣ /ಅಕ್ಷರಗಣವೆನಿಸುತ್ತದೆ. ಈ ಅಕ್ಷರಗಳನ್ನು ಸಂಸ್ಕೃತ ಛಂದಸ್ಸಿನಿಂದ ಕನ್ನಡವು ಪಡೆದುಕೊಂಡಿದೆ.ಮೂರು ಮೂರು ಅಕ್ಷರಗಳನ್ನು ಎಣಿಸಿ ಗಣವಿಭಾಗಿಸಲಾಗುವುದು.
✦ ಮಾತ್ರಾಗಣ : ಮಾತ್ರೆಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಮಾತ್ರಾಗಣ. ಮೂರು, ನಾಲ್ಕು ಅಥವಾ ಐದು ಮಾತ್ರೆಗಳಿಗೆ ಒಂದೊಂದು ಗಣ ಮಾಡಲಾಗುವುದು. ಸಾಲಿನಲ್ಲಿರುವ ಎಲ್ಲಾ ಮಾತ್ರೆಗಳನ್ನು ಗಣಗಳಾಗಿ ವಿಂಗಡಿಸಬೇಕು.
✦ ಮಾತ್ರೆ : ಒಂದು ಅಕ್ಷರವನ್ನು ಉಚ್ಚರಿಸಲು ಬೇಕಾದ ಕಾಲವನ್ನು ಮಾತ್ರೆ ಎಂಬ ಮಾನದಿಂದ ಅಳೆಯಲಾಗುವುದು.
✦ ಲಘು : ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಲಘು ( U) ಎನ್ನುವರು.
ಗುರು : ಎರಡು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಗುರು ( – ) ಎಂದು ಕರೆಯುವರು.
ಪ್ರಸ್ತಾರ : ಲಘು ಗುರುಗಳನ್ನು ಗುರುತಿಸುವ ಕ್ರಿಯೆಯನ್ನು ಪ್ರಸ್ತಾರ ಹಾಕುವುದು ಎನ್ನುವರು.

ಛಂದಸ್ಸಿನ ಕೃತಿಗಳು : 
1) 1ನೇ ನಾಗವರ್ಮ ಛಂದೋಬುದಿ
2) 2ನೇ ನಾಗವರ್ಮ ಛಂದೋವಿಚಿತಿ
3) ಜಯಕೀರ್ತಿ ಛಂದೋನುಶಾಸನಂ
4) 2ನೇ ಸೋಮೇಶ್ವರ ಮನಸೊಲ್ಲಾಸ
5) ಶಾಙ್ರ್ಗದೇವ ಸಂಗೀತ ರತ್ನಾಕರ
6) ಈಶ್ವರ ಕವಿ ಕವಿಜಿಹ್ವಾಬಂಧನ
7) ಗುಣಚಂದ್ರ ಛಂದಸ್ಸಾರ
8) ನಂದಿ ನಂಧಿಛಂದಸ್ಸು
9) ಖ)ಎಸ್)ಕರ್ಕಿ ಕನ್ನಡ ಛಂದೋವಿಕಾಸ
10) ಓ)ವಿ)ಚೆಂಕಟಛಲಶಾಸ್ತ್ರಿ ಕನ್ನಡ ಛಂದಸ್ಸು : ಸ್ವರೂಪ
11) ತೀ)ನಂ)ಶ್ರೀ ಹೊಸಗನ್ನಡ ಛಂದಸ್ಸು
12) ಬಿ)ಎಂ)ಶ್ರೀ ಕನ್ನಡ ಛಂದಸ್ಸಿನ ಚರಿತ್ರೆ

Leave a Reply

Your email address will not be published. Required fields are marked *

error: Content Copyright protected !!