GKKannadaSpardha Times

ಗಂಗಾಧರಂ ಶಾಸನ – Gangadharam Inscription

Share With Friends

✦ ಕನ್ನಡದ ಮೊಟ್ಟಮೊದಲ ಹಿರಿಯ ಕವಿಯಾದ ಪಂಪನ ಜೀವನಚರಿತ್ರೆಯನ್ನು ಮರುರೂಪಿಸುವುದರಲ್ಲಿ, ಗಂಗಾಧರಂ ಶಾಸನ ಅಥವಾ ಜಿನವಲ್ಲಭನ ಶಾಸನವು ಮಹತ್ವದ ಪಾತ್ರವನ್ನು ವಹಿಸಿದೆ. ಈ ಶಾಸನವು ಆಂಧ್ರಪ್ರದೇಶದ ಕರೀಂ ನಗರ ಜಿಲ್ಲೆಯ, ಗಂಗಾಧರಂ ಮಂಡಲಕ್ಕೆ ಸೇರಿದ ಕುರ್ಕ್ಯಾಲ ಎಂಬ ಹಳ್ಳಿಯಲ್ಲಿ ಒಂದು ಬೆಟ್ಟದ ಮೇಲೆ ಸಿಕ್ಕಿತು. 

✦ ಪಿ.ವಿ. ಪರಬ್ರಹ್ಮ ಶಾಸ್ತ್ರಿಗಳು 1976 ರಲ್ಲಿ ಸಂಪಾದಿಸಿ, ಪ್ರಕಟಿಸಿದ ‘Inscriptions of Andhrapradesh, Kareem Nagar DIstrict’ ಎಂಬ ಕೃತಿಯಲ್ಲಿ ಈ ಶಾಸನವನ್ನು ನೋಡಬಹುದು.

✦ಇದನ್ನು ಸ್ಥಾಪಿಸಿದವನು ಪಂಪನ ತಮ್ಮನಾದ ಜಿನವಲ್ಲಭ. ಇದರಲ್ಲಿ ಜಿನವಲ್ಲಭನನ್ನು ಕುರಿತು ಹೇರಳವಾದ ಮಾಹಿತಿ ಸಿಗುವುದಲ್ಲದೆ, ಪಂಪನನ್ನು ಕುರಿತಂತೆಯೂ ಮುಖ್ಯವಾದ ಸಂಗತಿಗಳು ಗೊತ್ತಾಗುತ್ತವೆ. 

✦ಜಿನವಲ್ಲಭನು ಪಾಂಡಿತ್ಯ ಮತ್ತು ಸಾಂಪತ್ತಿಕ ಸ್ಥಿತಿಗತಿಗಳೆಂಬ ಎರಡು ನೆಲೆಗಳಲ್ಲಿಯೂ ಶ್ರೀಮಂತನಾಗಿದ್ದನು. ಅವನಿಗೆ ಸಂಗೀತ ಮತ್ತು ಗಮಕಗಳಲ್ಲಿ ಪರಿಣತಿಯಿತ್ತು. ಅವನು ಅನೇಕ ಜೈನ ಬಸದಿಗಳು, ಕೊಳಗಳು ಮತ್ತು ಉದ್ಯಾನಗಳನ್ನು ನಿರ್ಮಿಸಿದ್ದನು. 

✦ಎಲ್ಲಕ್ಕಿಂತ ಮುಖ್ಯವಾಗಿ ಪಂಪ ಮತ್ತು ಜಿನವಲ್ಲಭರಿಬ್ಬರೂ ಭೀಮಪ್ಪಯ್ಯ ಮತ್ತು ಅಬ್ಬಣಬ್ಬೆಯರ ಮಕ್ಕಳೆಂದು ಈ ಶಾಸನವು ಸ್ಪಷ್ಟಪಡಿಸುತ್ತದೆ. ಅಬ್ಬಣಬ್ಬೆಯು ಉತ್ತರ ಕರ್ನಾಟಕದ ಅಣ್ಣಿಗೇರಿಯಿಂದ ಬಂದವಳೆಂಬ ಸಂಗತಿಯೂ ಇಲ್ಲಿಯೇ ತಿಳಿಯುತ್ತದೆ. 

✦ಪಂಪನ ಆಶ್ರಯದಾತನಾದ ಅರಿಕೇಸರಿಯು, ಧರ್ಮಪುರಿ ಅಗ್ರಹಾರವನ್ನು ಪಂಪನಿಗೆ ದತ್ತಿಯಾಗಿ ನೀಡಿದನೆಂಬ ವಿಷಯವನ್ನೂ ಈ ಶಾಸನದಲ್ಲಿ ಹೇಳಲಾಗಿದೆ. ಗಂಗಾಧರಂ ಶಾಸನವು ಕನ್ನಡ, ಸಂಸ್ಕೃತ ಮತ್ತು ತೆಲುಗುಗಳಲ್ಲಿ ರಚಿತವಾಗಿದೆ.

✦ಇಲ್ಲಿರುವ ತೆಲುಗು ಕಂದಪದ್ಯಗಳು ಆ ಭಾಷೆಯಲ್ಲಿ ದೊರಕಿರುವ ಅತ್ಯಂತ ಹಳೆಯ ಕಂದಪದ್ಯಗಳೆಂದು ಹೇಳಲಾಗಿದೆ. ಹೀಗೆ, ಈ ಶಾಸನವು ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ ಮುಖ್ಯವಾಗಿದೆ.

ಭಾರತದ ಸಂವಿಧಾನದಲ್ಲಿ ‘ವಿಪ್’ (WHIP) ಎಂದರೇನು..? ಎಷ್ಟು ವಿಧಗಳು..?

Leave a Reply

Your email address will not be published. Required fields are marked *

error: Content Copyright protected !!