GKHistorySpardha Times

ಅಸಹಕಾರ ಚಳವಳಿ-1920 (ಆಧುನಿಕ ಭಾರತದ ಇತಿಹಾಸ)

Share With Friends

1920 ಸೆಪ್ಟೆಂಬರ್ 4ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಲ್ಕತ್ತಾದ ವಿಶೇಷ ಅಧಿವೇಶನದಲ್ಲಿ ಅಸಹಕಾರ ಚಳವಳಿ ಆರಂಭಿಸಲು ಗೊತ್ತುವಳಿಯೊಂದನ್ನು ಅನುಮೋದಿಸಿತು. ಅಹಿಂಸೆಯ ಮೂಲಕ ಸ್ವರಾಜ್‍ಗಳಿಕೆ, ಬ್ರಿಟಿಷರ ನಿರ್ದಯಿ ಆಡಳಿತದ ವಿಕೃತ ಸ್ವರೂಪನ್ನು ಜನರಿಗೆ ಪರಿಚಯಿಸುವುದು ಹಾಗೂ ಮುಖ್ಯವಾಗಿ ಜಲಿಯನ್‍ವಾಲಾಬಾಗ್ ಹತ್ಯಾಕಾಂಡದಂತಹ ಘಟನೆಗಳು ಭವಿಷತ್ತಿನಲ್ಲಿ ನಡೆಯದಂತೆ ವಿರೋಧಿಸುವುದು, ಬ್ರಿಟಿಷ್ ಆಡಳಿತವನ್ನು ಸಂಪೂರ್ಣ ವಿರೋಧಿಸುವುದು ಪ್ರಮುಖ ಗುರಿಯಾಗಿತ್ತು. ಅದರೊಂದಿಗೆ ರೌಲತ್ ಕಾಯ್ದೆಯನ್ನು ಬ್ರಿಟಿಷ್ ಸರಕಾರ ಹಿಂತೆಗೆದುಕೊಳ್ಳುವುದು ಮತ್ತು ಹೊಸ ರಾಜಕೀಯ ಸುಧಾರಣೆಗಳನ್ನು ಜಾರಿಗೊಳಿಸುವ ಮೂಲಕ ಸ್ವರಾಜ್ಯವನ್ನು ಭಾರತಕ್ಕೆ ನೀಡಬೇಕೆಂಬುದು ಪ್ರಮುಖ ಬೇಡಿಕೆಯಾಗಿತ್ತು.

ಅಸಹಕಾರ ಚಳವಳಿಯ ಪ್ರಮುಖ ಕಾರ್ಯಕ್ರಮಗಳು :
1.ಶಾಲಾ ಕಾಲೇಜುಗಳನ್ನು ಮತ್ತು ನ್ಯಾಯಾಲಯಗಳನ್ನು ಬಹಿಷ್ಕರಿಸುವುದು.
2.1919ರ ಕಾಯ್ದೆಯನ್ವಯ ಪ್ರಾಂತೀಯ ಶಾಸನ ಸಭೆಗಳಿಗೆ ನಡೆಯುವ ಚುನಾವಣೆಯನ್ನು ಬಹಿಷ್ಕರಿಸುವುದು.
3.ಬ್ರಿಟಿಷರು ನೀಡಿರುವ ಗೌರವ ಪದವಿಗಳನ್ನು ಮತ್ತು ಸ್ಥಾನಗಳನ್ನು ವಾಪಸ್ಸು ಮಾಡುವುದು.
4.ಸ್ಥಳೀಯ ಸಭೆಗಳಿಗೆ ನಾಮನಿರ್ದೇಶನಗೊಂಡ ಸದಸ್ಯರು ರಾಜೀನಾಮೆ ನೀಡುವುದು.
5.ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ ಬಹಿಷ್ಕರಿಸುವುದು.
6.ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವುದು.

ಇವುಗಳ ಜೊತೆಗೆ ಅಸಹಕಾರ ಚಳವಳಿಯ ಇತರ ಪ್ರಮುಖ ಕಾರ್ಯ ಯೋಜನೆಗಳೆಂದರೆ; ಕೈಮಗ್ಗದ ನೇಕಾರಿಕೆಯನ್ನು ಉತ್ತೇಜಿಸುವುದು ಮತ್ತು ಖಾದಿಯನ್ನು ತಯಾರಿಸುವುದು, ರಾಷ್ಟ್ರೀಯ ಶಾಲೆಗಳನ್ನು ತೆರೆಯುವುದು, ಹಿಂದೂ ಮತ್ತು ಮುಸ್ಲಿಂರ ನಡುವೆ ಐಕ್ಯತೆಯನ್ನು ಸಾಧಿಸುವುದು, ಅಸ್ಪ್ರಶ್ಯತೆಯನ್ನು ಹೋಗಲಾಡಿಸುವುದು ಮತ್ತು ಮಹಿಳೆಯರನ್ನು ಶೋಚನೀಯ ಸ್ಥಿತಿಯಿಂದ ಪಾರು ಮಾಡಿ ಅವರಲ್ಲಿ ಸಬಲೀಕರಣವನ್ನು ತರುವುದು.

ಅಸಹಕಾರ ಚಳವಳಿಯ ಸಂದರ್ಭದಲ್ಲಿ ಆದ ಪ್ರಮುಖ ಬೆಳೆವಣಿಗೆಗಳು :
1.ದೇಶಬಂಧು ಚಿತ್ತರಂಜನ್‍ದಾಸ್, ಮೋತಿಲಾಲ್ ನೆಹರೂ, ರಾಜೇಂದ್ರ ಪ್ರಸಾದ್ ಮೊದಲಾದ ಹಿರಿಯ ವಕೀಲರು ತಮ್ಮ ವಕೀಲ ವೃತ್ತಿಯನ್ನು ಬಿಟ್ಟರು.
2.ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳನ್ನು ತೊರೆದರು.
3.ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸದೆ ಕಾಂಗ್ರೆಸ್ 1919ರ ಕಾಯ್ದೆಯ ಅಡಿಯಲ್ಲಿ ಪ್ರಾಂತ್ಯಗಳಿಗೆ ನಡೆದ ಚುನಾವಣೆಯನ್ನು ಬಹಿಷ್ಕರಿಸಿತು.
4.ಕಾಶಿ ವಿದ್ಯಾಪೀಠ, ಗುಜರಾತ್ ವಿದ್ಯಾಪೀಠ, ಬಿಹಾರ ವಿದ್ಯಾಪೀಠ ಮತ್ತು ಜಾಮೀಯಾ ಮಿಲಿಯಾ ಇಸ್ಲಾಮಿಯಾ ರಾಷ್ಟ್ರೀಯ ವಿದ್ಯಾಲಯಗಳನ್ನು ಸ್ಥಾಪಿಸಲಾಯಿತು.
5.ರವಿಂದ್ರನಾಥ ಠಾಗೂರರ ತಮ್ಮ ‘ನೈಟ್ ವುಡ್’ ಪದವಿಯನ್ನು ಬ್ರಿಟಿಷ್ ಸರ್ಕಾರಕ್ಕೆ ಹಿಂದಿರುಗಿಸಿದರು.
6.ಮಹಿಳೆಯರೂ ಸೇರಿದಂತೆ ಜನಸಾಮಾನ್ಯರು ಕಾಂಗ್ರೆಸ್ ಹೋರಾಟಕ್ಕೆ ದೇಣಿಗೆ ನೀಡಿದರು. ವಿದೇಶಿ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳ ಮುಂದೆ ಮುಷ್ಕರ ನಡೆಸಲಾಯಿತು ಮತ್ತು ವಿದೇಶಿ ಬಟ್ಟೆಗಳನ್ನು ಸುಡಲಾಯಿತು.
7.1921ರಲ್ಲಿ ‘ಪ್ರಿನ್ಸ್ ಆಫ್ ವೇಲ್ಸ್’ ರಾಜಕುಮಾರ ಬರುವ ಕಾರ್ಯಕ್ರಮವನ್ನು ವಿರೋಧಿಸಲಾಯಿತು.

ಅಸಹಕಾರ ಚಳವಳಿಯ ಪರಿಣಾಮಗಳು:
ಈ ಚಳವಳಿಯ ಪ್ರಮುಖ ಉದ್ದೇಶಗಳು ಕೈಗೂಡದಿದ್ದರೂ ಕೆಲವು ಗಂಭೀರ ಪರಿಣಾಮಗಳನ್ನು ಸೃಷ್ಟಿಸಿತ್ತು. ಪ್ರಮುಖವಾಗಿ ರಾಷ್ಟ್ರೀಯ ಹೋರಾಟ ಜನರ ಹೋರಾಟವಾಗಿ ರೂಪಾಂತರವಾಯಿತು. ಕಾಂಗ್ರೆಸ್ ಪ್ರಣೀತ ಚಳವಳಿಯು ಕ್ರಾಂತಿಕಾರಕ ಆಯಾಮಗಳನ್ನು ಪಡೆಯಿತು. ಹಿಂದೂ ಮುಸ್ಲಿಂ ಭ್ರಾತೃತ್ವವನ್ನು ತಾತ್ಕಾಲಿಕವಾಗಿಯಾದರೂ ಸೃಷ್ಟಿಸಿತು. ರಾಷ್ಟ್ರೀಯ ಹೋರಾಟ, ನಗರಗಳನ್ನು ದಾಟಿ ಗ್ರಾಮಾಂತರ ಪ್ರದೇಶಗಳಿಗೂ ಹಬ್ಬಲು ಪ್ರಾರಂಭಿಸಿತು. ಅಸ್ಪ್ರಶ್ಯತೆಯ ನಿವಾರಣೆ, ಮಹಿಳೆಯರಿಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶ ಮುಂತಾದವು ಗಮನಿಸಲೇಬೇಕಾದ ಪರಿಣಾಮಗಳಾಗಿವೆ.

ಭಾರತಕ್ಕೆ ಯುರೋಪಿಯನ್ನರ ಆಗಮನ : ಪ್ರಮುಖ ಪ್ರಶ್ನೆಗಳು

Leave a Reply

Your email address will not be published. Required fields are marked *

error: Content Copyright protected !!