AwardsCurrent AffairsSpardha Times

ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್‌ಗೆ ಮರಣೋತ್ತರ ‘ಭಾರತ ರತ್ನ’ ಪ್ರಶಸ್ತಿ

Share With Friends

ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ , ಸರಳ ಜೀವನಕ್ಕೆ ಹೆಸರಾದ, ದೀನ ದಲಿತರು, ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದ ಕರ್ಪೂರಿ ಠಾಕೂರ್(Karpoori Thakur) ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರವಾಗಿ ಅತ್ಯುನ್ನತ ನಾಗರೀಕ ಪ್ರಶಸ್ತಿಯಾಗಿರುವ ಭಾರತ ರತ್ನ ( Bharat ratna) ಪ್ರಶಸ್ತಿ ನೀಡಿ ಗೌರವಿಸಿದೆ.

✦ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ; 26 ತಿಂಗಳು ಜೈಲುವಾಸ :
ಕರ್ಪೂರಿ ಠಾಕೂರ್ ಅವರು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ತೊಡಗಿಸಿಕೊಂಡ ಸ್ವಾತಂತ್ರ್ಯ ಹೋರಾಟಗಾರ. ಸ್ವಾತಂತ್ರ್ಯ ಹೋರಾಟದಲ್ಲಿ ಧುಮಿಕಿದ ಕರ್ಪೂರಿ ಠಾಕೂರ್ 26 ತಿಂಗಳು ಜೈಲು ವಾಸ ಸಹ ಅನುಭವಿಸಿದ್ದರು. ಇನ್ನು ಠಾಕೂರ್ ಅವರು ಮೊದಲ ಬಾರಿಗೆ 1970 ರಿಂದ 1971 ರ ವರೆಗೆ ಮತ್ತು ಎರಡನೇ ಬಾರಿಗೆ 1977ರಿಂದ 1979ರ ವರೆಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು. 1988ರಲ್ಲಿ ತಮ್ಮ 64 ವಯಸ್ಸಿನಲ್ಲಿ ನಿಧನರಾದರು.

ಅವರ ಸರಳತೆಗೆ ಇಲ್ಲಿವೆ ಕೆಲವು ಉದಾಹರಣೆಗಳು :
✦ ಜನವರಿ 24, 1924 ರಂದು ಬಿಹಾರದ ಸಮಸ್ತಿಪುರ್ ಜಿಲ್ಲೆಯ ಪಿಟೊಂಜಿಯಾದಲ್ಲಿ(ಈಗ ಕರ್ಪೂರಿಗ್ರಾಮ್) ಜನಿಸಿದ ಠಾಕೂರ್ ಅವರು ಬಿಹಾರದ ಉಪ ಮುಖ್ಯಮಂತ್ರಿಯಾಗಿ ಮತ್ತು ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸರಳತೆಯ ಬಗ್ಗೆ ಅನೇಕ ಕಥೆಗಳಿವೆ. 1952 ರಲ್ಲಿ ಅವರು ಮೊದಲ ಬಾರಿಗೆ ಶಾಸಕರಾದಾಗ ಅವರು ಆಸ್ಟ್ರಿಯಾಗೆ ಹೋಗುವ ನಿಯೋಗದಲ್ಲಿ ಇದ್ದರು. ಆದರೆ ಅವರ ಬಳಿ ಧರಿಸಲು ಒಂದು ಕೋಟ್ ಸಹ ಇರಲಿಲ್ಲ. ಗೆಳೆಯನ ಬಳಿ ಕೋಟು ಕೇಳಿದಾಗ ಅದೂ ಹರಿದದ್ದು ತಂದು ಕೊಟ್ಟಿದ್ದರು. ಕರ್ಪೂರಿ ಅದೇ ಕೋಟ್ ಧರಿಸಿ ಹೊರಟು ಹೋಗಿದ್ದರು. ಅಲ್ಲಿ ಯುಗೊಸ್ಲಾವಿಯಾದ ಮುಖ್ಯಸ್ಥ ಮಾರ್ಷಲ್ ಟಿಟೊ ಅವರು ಹರಿದ ಕೋಟ್ ಅನ್ನು ಗಮನಸಿ ಅವರಿಗೆ ಹೊಸ ಕೋಟ್ ಅನ್ನು ಉಡುಗೊರೆಯಾಗಿ ನೀಡಿದ್ದರು.

✦ ಕರ್ಪೂರಿ ಠಾಕೂರ್ ಅವರ ಬಳಿ ಕಾರು ಇರಲಿಲ್ಲ. 80ರ ದಶಕದಲ್ಲಿ ಕರ್ಪೂರಿ ಠಾಕೂರ್ ಅವರು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು. ಒಮ್ಮೆ ಊಟಕ್ಕೆ ನಿವಾಸಕ್ಕೆ ಹೋಗಬೇಕಿತ್ತು. ಸ್ವಲ್ಪ ಹೊತ್ತು ಅವರದೇ ಪಕ್ಷದ ಶಾಸಕರಿಗೆ ಜೀಪ್ ಕೊಡಿ ಎಂದು ಕೇಳಿದಾಗ, ಆ ಶಾಸಕರು, ನನ್ನ ಜೀಪಿನಲ್ಲಿ ಎಣ್ಣೆ ಇಲ್ಲ. ನೀವು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಿರಿ. ಕಾರು ಏಕೆ ಖರೀದಿಸಬಾರದು? ಎಂದು ಪ್ರಶ್ನಿಸಿದ್ದರು. ಅವರು ಸದಾ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದರು.

Read More..: ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್‌ಗೆ ಮರಣೋತ್ತರ ‘ಭಾರತ ರತ್ನ’ ಪ್ರಶಸ್ತಿ

✦ ಹಿರಿಯ ಪತ್ರಕರ್ತ ಸುರೇಂದ್ರ ಕಿಶೋರ್ ಅವರು 1977 ರ ಒಂದು ಘಟನೆಯ ಬಗ್ಗೆ ಬರೆದಿದ್ದಾರೆ, ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನವನ್ನು ಪಾಟ್ನಾದ ಕದಮ್ ಕುವಾನ್‌ನಲ್ಲಿರುವ ಚರಖಾ ಸಮಿತಿ ಕಟ್ಟಡದಲ್ಲಿ ಆಚರಿಸಲಾಯಿತು. ಇದರಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್, ನಾನಾಜಿ ದೇಶಮುಖ್ ಸೇರಿದಂತೆ ದೇಶಾದ್ಯಂತ ಹಲವು ಮುಖಂಡರು ಭಾಗವಹಿಸಿದ್ದರು. ಬಿಹಾರ ಮುಖ್ಯಮಂತ್ರಿ ಕರ್ಪೂರಿ ಠಾಕುರ್ ಅವರು ಹರಿದ ಕುರ್ತಾ, ಹರಿದ ಚಪ್ಪಲಿಯೊಂದಿಗೆ ಆಗಮಿಸಿದರು. ಇದನ್ನು ಗಮನಿಸಿದ ಚಂದ್ರಶೇಖರ್ ಅವರು ಒಬ್ಬ ನಾಯಕ ‘ಮುಖ್ಯಮಂತ್ರಿ ಚೆನ್ನಾಗಿ ಬದುಕಲು ಎಷ್ಟು ಸಂಬಳ ಪಡೆಯಬೇಕು? ಎಂದು ಪ್ರಶ್ನಿಸಿದರ.

ಆಗ ಎಲ್ಲರೂ ನಗಲು ಪ್ರಾರಂಭಿಸಿದರು. ಚಂದ್ರಶೇಖರ್ ತಮ್ಮ ಆಸನದಿಂದ ಎದ್ದು ನಿಂತು ತಮ್ಮ ಕುರ್ತಾವನ್ನು ಹರಡಿ, ಕರ್ಪೂರಿ ಅವರ ಕುರ್ತಾ ನಿಧಿಗೆ ದೇಣಿಗೆ ನೀಡಿ ಎಂದು ಹೇಳಲು ಪ್ರಾರಂಭಿಸಿದರು. ನೂರಾರು ರೂಪಾಯಿ ಹಣ ಸಂಗ್ರಹವಾಗಿದ್ದು, ಅದರಿಂದ ನೀವು ಕುರ್ತಾ-ಧೋತಿಯನ್ನು ಮಾತ್ರ ಖರೀದಿಸುತ್ತೀರಾ ಎಂದು ಕರ್ಪೂರಿ ಅವರನ್ನು ಕೇಳಿದಾಗ, ಕರ್ಪೂರಿ ಅವರು “ನಾನು ಅದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುತ್ತೇನೆ” ಎಂದು ಹೇಳಿದ್ದರು.

1970ರಿಂದ 71ರ ನಡುವೆ ಕರ್ಪೂರಿ ಠಾಕೂರ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ತಮ್ಮ ಮಗಳಿಗೆ ಮದುವೆ ಮಾಡಿದ್ದರು. ಆ ಸಮಯದಲ್ಲಿ ಅವರು ತಮ್ಮ ಮಗಳಿಗೆ ಹುಡುಗನನ್ನು ಹುಡುಕಲು ರಾಂಚಿಗೆ ಹೋಗಬೇಕಾಗಿತ್ತು. ಇದಕ್ಕಾಗಿ ಮುಖ್ಯಮಂತ್ರಿಗಳ ಅಧಿಕೃತ ವಾಹನ ಬಳಸದೆ ಟ್ಯಾಕ್ಸಿ ಹಿಡಿದುಕೊಂಡೇ ರಾಂಚಿಗೆ ತೆರಳುತ್ತಿದ್ದರು. ಅಲ್ಲದೆ ತಮ್ಮ ಮಗಳ ಮದುವೆಯನ್ನ ದೇವಾಲಯದಲ್ಲಿ ಸರಳವಾಗಿ ಮಾಡಲು ಬಯಸಿದ್ದರು. ಆದರೆ ಅವರ ಹೆಂಡತಿಯ ಇಚ್ಛೆಯಿಂದಾಗಿ ಮದುವೆಯು ಪಿತೌಜಿಯಾ ತಮ್ಮ ಸ್ವಗ್ರಾಮದಲ್ಲಿ ನೆರೆವೇರಿಸಿದ್ದರು.

ಈ ಮೂಲಕ ಕರ್ಪೂರಿ ಠಾಕೂರ್ ಅವರು ತಮ್ಮ ಪತ್ನಿಯ ಆಸೆಯನ್ನು ಪೂರೈಸಿದರು. ವಿಶೇಷವೆಂದರೆ ಅವರು ತಮ್ಮ ಪಕ್ಷದವರೂ ಸೇರಿದಂತೆ ಯಾವುದೇ ಜನ ನಾಯಕರನ್ನು ಅಥವಾ ಅವರ ಸ್ನೇಹಿತರನ್ನು ಆ ಮದುವೆಗೆ ಆಹ್ವಾನಿಸಲಿಲ್ಲ. ಅಷ್ಟೇ ಏಕೆ ಮುಖ್ಯಮಂತ್ರಿ ಜತೆ ಸದಾ ಇರುವ ಭದ್ರತಾ ಸಿಬ್ಬಂದಿ ಹಾಗೂ ಜಿಲ್ಲಾಡಳಿತದ ಯಾವೊಬ್ಬ ಅಧಿಕಾರಿಗೂ ಕೂಡ ಮದುವೆಗೆ ಆಹ್ವಾನಿಸಿರಲಿಲ್ಲ. ಒಂದು ವೇಳೆ ವಿಷಯ ತಿಳಿದು ಯಾರಾದರೂ ಬರಬಹುದೆಂದು ಬಿಹಾರ ಸರ್ಕಾರದ ದರ್ಭಾಂಗ ಮತ್ತು ಸಹರ್ಸಾ ವಿಮಾನ ನಿಲ್ದಾಣಗಳಲ್ಲಿ ಆ ದಿನ ಯಾವುದೇ ವಿಮಾನವನ್ನು ಇಳಿಯಬಾರದು ಎಂದು ಆದೇಶ ನೀಡಿದ್ದರು. ಒಂದು ವೇಳೆ ವಿಮಾನ ಇಳಿದರೆ ಸರ್ಕಾರದ ಕಾರ್ಯದರ್ಶಿಯ ಅನುಮತಿ ಪಡೆಯಬೇಕೆಂದು ತಿಳಿಸಿದ್ದರು.

✦ 36 ವರ್ಷ ಶಾಸಕರಾಗಿ, ಹಲವು ಬಾರಿ ಸಚಿವರಾಗಿ, 2 ಬಾರಿ ಮುಖ್ಯಮಂತ್ರಿಯಾಗಿದ್ದರೂ ಸಹಾ ಕರ್ಪೂರಿ ಠಾಕೂರ್ ಅವರು ಒಂದೇ ಒಂದು ಕಾರು ಖರೀದಿಸಲು ಸಾಧ್ಯವಾಗಿಲ್ಲ ಎನ್ನುವುದು ಅವರು ಎಷ್ಟು ಸ್ವಚ್ಛವಾಗಿ ಬದುಕಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿದೆ.

✦ ಕರ್ಪೂರಿ ಠಾಕೂರ್ ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎನ್ನುವುದಕ್ಕೆ ಇನ್ನೊಂದು ಕಥೆಯಿದೆ. ಒಮ್ಮೆ ಅವರ ಭಾವಮೈದ ರಾಕೂರ ಬಳಿ ಬಂದು ತಮಗೆ ಶಿಫಾರಸು ಮಾಡಿ ಒಂದು ಕೆಲಸ ಕೊಡಿಸುವಂತೆ ಕೇಳಿದ್ರಂತೆ. ತುಂಬಾ ಯೋಚಿಸಿ ಜೇಬಿನಿಂದ 50 ರೂಪಾಯಿ ತೆಗೆದು ಆತನ ಕೈಗೆ ಕೊಟ್ಟು, ಹೋಗಿ ತಮ್ಮ ಪೂರ್ವಿಕರ ವೃತ್ತಿಯಾದ ಕ್ಷೌರಿಕ ವೃತ್ತಿ ಮಾಡುವುದಕ್ಕೆ ಕತ್ತರಿ,ಶೇವಿಂಗ್ ಉಪಕರಣಗಳನ್ನು ಖರೀದಿಸುವಂತೆ ಹೇಳಿ ಕಳುಹಿಸಿದ್ದರಂತೆ.

✦ ಠಾಕೂರ್​ ಅವರು ಸರ್ಕಾರಿ ಭತ್ಯೆಯ ಹೊರತಾಗಿ ಯಾರಿಂದಲೂ ಒಂದು ಪೈಸೆಯೂ ಹೆಚ್ಚುವರಿಯಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಕರ್ಪೂರಿ ಠಾಕೂರ್ ಇಂತಹ ಅನೇಕ ಸ್ಪೂರ್ತಿದಾಯಕಥೆಗಳಿವೆ.

✦ ಇದನ್ನೂ ಓದಿ : ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ

Leave a Reply

Your email address will not be published. Required fields are marked *

error: Content Copyright protected !!